Tuesday, 22 December 2015

ಆವಿಸ್ಮರಣಿಯ ಥೈಲ್ಯಾಂಡ್.

ಆವಿಸ್ಮರಣಿಯ ಥೈಲ್ಯಾಂಡ್
 
 
 ಈ ಸಲ ದಸರಾ ರಜೆಯಲ್ಲಿ ಥೈಲ್ಯಾಂಡಿನ ಪ್ರವಾಸ ಮಾಡುವುದು ಎಂದು ಸುಮಾರು ಮೂರು ತಿಂಗಳ ಹಿಂದೆಯ ನಿರ್ಧರಿಸಿಯಾಗಿತ್ತು.ಅದೇ ಪ್ರಕಾರ ಪ್ರವಾಸದ ತಯಾರಿ ಶುರುವಾಗೇಬಿಟ್ಟಿತು. ಬೆಂಗಳೂರಿನಿಂದ ಬ್ಯಾಂಕಾಕ್ ಗೆ     ಥಾಯ್ ಏರ್‌ವೆಸ್‌ನಲ್ಲಿ ಮತ್ತು ಥೈಲ್ಯಾಂಡಿನ  ಆಂತರಿಕ ವಿಮಾನಯಾನಕ್ಕೆ ಏರ್ ಏಶಿಯಾದ ವಿಮ್ಮಾನಗಳಲ್ಲಿ ಸೀಟುಗಳನ್ನು ಕಾಯಿದಿರಿಸಲಾಯಿತು.  ಮುಂಚಿತವಾಗಿ ಕಾಯಿದಿರಿಸಿದ್ದರಿಂದ ವಿಮಾನಗಳಲ್ಲಿ ಮತ್ತು ಹೋಟೆಲ್‌ಗಳಲ್ಲಿ ಒಳ್ಳೆಯ ರಿಯಾಯಿತಿ ಸಿಕ್ಕಿತು.ತುಂಬಾ ಶಿಸ್ತಿನಿಂದ ತಲಾ ಒಬ್ಬಬರಿಗೆ ಎರಡು ಚಿಕ್ಕ ಸೂಟ್ಕೇಸ್ ಮತ್ತು ಬ್ಯಾಗ್ಗಳನ್ನು ಪ್ಯಾಕ್ ಮಾಡಿದ್ದರಿಂದ ಎಲ್ಲೂ ಅಧಿಕ ಲಗೇಜಿಗೆ ಶುಲ್ಕ ತೆರಬೇಕಾಗಿ ಬರಲಿಲ್ಲ.

 

                  ಬೆಂಗಳೂರಿನಿಂದ ಮಧ್ಯರಾತ್ರಿ 12:30ಕ್ಕೆ ಹೊರಟ ವಿಮಾನ ಮೂರುವರೆ ತಾಸಿನಯಾನದ ನಂತರ ಬೆಳಗ್ಗೆ ಥೈಲ್ಯಾಂಡ್ ಸಮಯದ 5:30 ಕ್ಕೆ ಬ್ಯಾಂಕಾಕ್ನ    "ಸುವರ್ಣಭೂಮಿ"  ವಿಮಾನನಿಲ್ದಾಣದಲ್ಲಿ ಬಂದಿಳಿಯಿತು. ಬೆಂಗಳೂರಿಗೂ ಬ್ಯಾಂಕಾಕ್ ಗೂ  1:30 ಘಂಟೆಗಳ ಮುನ್ನಡೆ ಇರುತ್ತದೆ. ಅದೇ ಪ್ರಕಾರ ನಮ್ಮ ಮೊಬೈಲುಗಳಲ್ಲಿ  ಈ ಬದಲಾದ ಸಮಯವನ್ನು ಹೊಂದಿಸಿಕೊಳ್ಳಲಾಯಿತು.  ಬ್ಯಾಂಕಾಕ್  ವಿಮಾನನಿಲ್ದಾಣದ ನೆಲಮಾಳಿಗೆಯಲ್ಲೇ ಸುಸಜ್ಜಿತವಾದ ಮೆಟ್ರೋ ರೈಲುನಿಲ್ದಾಣವನ್ನು ನೋಡಿ ನಾವೆಲ್ಲರೂ ಆಶ್ಚರ್ಯಚಕಿತಗೊಂಡೆವು.  ಬ್ಯಾಂಕಾಕ್ ನಗರದ 35 ಕಿಲೋಮೀಟರ್ಗಳ ದೂರ ಬರಿ 25 ನಿಮಿಷಗಳಲ್ಲಿ ಕ್ರಮಿಸಿ "ಫಾಯ ಥೈ" ನಿಲ್ದಾಣದಲ್ಲಿ ಬಂದಿಳಿದೆವು.  ಅಲ್ಲಿಂದ ಕಾರಿನಲ್ಲಿ ಅಲ್ಲಿಯ ಪ್ರಮುಖವಾದ ಭೌದ್ಧ ಮಂದಿರಗಳು ಹಾಗೂ ಅರಮನೆಗಳಿಗೆ  ಭೇಟಿ ನೀಡಿದೆವು. 

               ಬ್ಯಾಂಕಾಕ್ನ  ಸ್ವಚ್ಛತೆ ಮತ್ತು ಸುಂದರತೆಗೆ ನಮ್ಮ ಮನಸುಗಳು ಮಾರು ಹೋದವು.   ಭಾಷೆಯ ಗೊಂದಲವಿದ್ದರೂ, ಸ್ಥಳೀಯರ ಸರಳತೆ ಮತ್ತು ಸಹೃದಯತೆ ನಮ್ಮ ಮನಸೆಳೆದವು.   "ಸಾವಾದೀ ಕಾ...." ಎಂದು ಹೃತ್ಪೂರ್ವಕವಾಗಿ ಕೈ ಜೋಡಿಸಿ, ತಲೆ ಬಾಗಿಸಿ ಸಮಸ್ಕರಿಸುವ ಶೈಲಿ ವ್ಹಾ.... ಎಂತಹ ಆತ್ಮೀಯತೆ!.

            ಥಾಯ್ ಭಾಷೆಯಲ್ಲಿ ವಾಟ್ (WAT)  ಎಂದರೆ ಭೌದ್ಧ ದೇವಸ್ಥಾನ.  ಪ್ರಮುಖವಾದ ದೇವಸ್ಥಾನಗಳೆಂದರೆ ವಾಟ್ ಫೋ, ವಾಟ್ ಟ್ರಿಮಿಟ್ ಮತ್ತು ವಾಟ್ ಅರುನ್.   ವಾಟ್ ಫೋದಲ್ಲಿ 150 ಅಡಿ ಉದ್ದದ ಶಯನ ಬುದ್ಧನ ಬಂಗಾರದ ಮೂರ್ತಿಯಿದೆ.  ದೇವಸ್ಥಾನದ ಒಳಗೆ 108 ಕಂಚಿನ ಪಾತ್ರೆಗಳನ್ನು ಇಟ್ಟಿದ್ದಾರೆ, ಭಕ್ತಾದಿಗಳು ಅದರಲ್ಲಿ ಒಂದೊಂದೇ ನಾಣ್ಯಗಳನ್ನು ಹಾಕುತ್ತಾ ಹೋಗುತ್ತಾರೆ.   ಈ ನಾಣ್ಯಗಳು ಬೀಳುವ ಶಬ್ಧವೇ ದೇವಸ್ಥಾನದ ಒಳಗಡೆ ಘಂಟಾ ನಾದದಂತೆ ಪ್ರತಿಧ್ವನಿಸುತ್ತದೆ.

 

              ಇನ್ನೊಂದು ಪ್ರಮುಖ ಬೌದ್ಧ ಮಂದಿರ ವಾಟ್ ಟ್ರಿಮಿಟ್.  ಇಲ್ಲಿ ಸುಮಾರು 5500 kg ಗಳಷ್ಟು 18 ಕ್ಯಾರೆಟ್ನ   ಬಂಗಾರದ ಬುದ್ಧನ ಪ್ರತಿಮೆ ಇದೆ.   ಸುಮಾರು 14 ನೇ ಶತಮಾನದಲ್ಲಿ ಈ ಪ್ರತಿಮೆಯನ್ನು ಭಾರತದಲ್ಲಿ ತಯಾರಿಸಿ ಬ್ಯಾಂಕಾಕ್ ಗೆ   ಸಾಗಿಸಲಾಗಿತ್ತು ಎಂದು ಹೇಳುತ್ತಾರೆ.  ಈಗಿನ ಬೆಲೆ ಸುಮಾರು 16,300 ಕೋಟಿಗಳಷ್ಟಾದರು ಆಗಬಹುದು!  ಬ್ಯಾಂಕಾಕ್ ನ  ಏರ್‌ಪೋರ್ಟ್ ನ  ಹೆಸರು "ಸುವರ್ಣಭೂಮಿ" ಎಂದು ಏಕೆ ಇಟ್ಟಿರಬಹುದು ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಂತಾಯಿತು.

              ನಮ್ಮ ಮುಂದಿನ ಪ್ರಯಾಣ "ಕ್ರಾಬಿ " ಎನ್ನುವ ದ್ವೀಪಕ್ಕೆ.   ಏರ್ ಏಶಿಯಾದ  ವಿಮಾನದಲ್ಲಿ ಸುಮಾರು ಒಂದು ಘಂಟೆಯ ವಿಮಾನಯಾನ.   ಮೂರು ದಿನಗಳು ಕಳೆದದ್ದೇ ಗೊತ್ತಾಗಲಿಲ್ಲ ಈ ಸುಂದರವಾದ ದ್ವೀಪದಲ್ಲಿ.   ನಮ್ಮ ಮಗಳಂತೂ "ಜಲಕನ್ಯೆ"ಯಾಗಿ ಬಿಟ್ಟಿದ್ದಳು, ಬೆಳಿಗ್ಗೆ ಮತ್ತು ಸಂಜೆ ಸಮುದ್ರದಲ್ಲಿ, ಮಧ್ಯಾಹ್ನ  ಹೋಟೆಲಿನ ಈಜುಕೊಳದಲ್ಲಿ ಸ್ನಾನವೋಸ್ನಾನ!.  ಇಲ್ಲಿಯ ಸಮುದ್ರದ ನೀರು ಎಷ್ಟು ತಿಳಿಯಾಗಿತ್ತೆಂದರೆ, ಸಮುದ್ರದ ಎಲ್ಲಾ ಜೀವರಾಶಿಗಳು, ಸಮುದ್ರದ ತಳ, ಎಲ್ಲವೂ ಗಾಜಿನಲ್ಲಿ ನೋಡಿದ ಹಾಗೆ ಕಾಣುತ್ತದೆ.  ಸಮುದ್ರದ ಮಧ್ಯದಲ್ಲಿ ಧುತ್ ಎಂದು ಎದ್ದು ಕಾಣುವ ಶಿಲಾಬಂಡೆಗಳು, ಬಂಡೆಗಳನ್ನಾವರಿಸಿರುವ ಹರಿದ್ರ ಸಸ್ಯರಾಶಿ, ಅಧ್ಬುತ!.

                 ಮುಂದಿನ ಪ್ರಯಾಣ ಇನ್ನೊಂದು ಸುಂದರ ತಾಣ "ಪಟಾಂಗ್", ಮೂರು ಘಂಟೆಗಳ ಅತ್ಯಂತ ವಿಹಂಗಮ ಪ್ರಯಾಣದ ನಂತರ ಇಲ್ಲಿಗೆ ಬಂದು ತಲುಪಿದೆವು. ವಿದೇಶಿ ಪ್ರವಾಸಿಗರ ಅಚ್ಚುಮೆಚ್ಚಿನ ಸ್ಥಳ. ಪ್ರವಾಸಿಗರ ಮನೋರಂಜನೆಗೆಂದು   ಅಲ್ಲಿಯ ಬೀಚುಗಳಲ್ಲಿ ಒಂದಲ್ಲ ಒಂದು ಕಾರ್ಯಕ್ರಮ ಇದ್ದೇ ಇರುತ್ತದೆ. ಭಾನುವಾರ ಬೆಳಗ್ಗೇನೇ ಬೀಚಿಗೆ ಹೋದ ನಮಗೆ ಒಂದು ಆಶ್ಚರ್ಯ ಕಾದಿತ್ತು. ಎಲ್ಲ ಕಡೆ ಗುಲಾಬಿ ಬಣ್ಣದ ಬ್ಯಾನರ್ ಗಳು, ಗುಲಾಬಿ ಬಣ್ಣದ ಟೀ ಶರ್ಟ್‌ನಲ್ಲಿ ಕಂಗೊಳಿಸುತ್ತಿದ್ದ ಯುವಕ ಯುವತಿಯರು.  ಅದು ಬೀಚ್ ಹಬ್ಬ ಎಂದು ಗೊತ್ತಾಯಿತು. ವಿಚಿತ್ರ ಧರಿಸು, ಅಲಂಕಾರಗಳಿಂದ ಗಮನ ಸೆಳೆಯುತ್ತಿದ್ದ ರೂಪದರ್ಶಿಯರು.  ಎಲ್ಲರಲ್ಲೂ ಹಬ್ಬದ ಉತ್ಸಾಹ, ಉಲ್ಲಾಸ. ಯಾವುದೋ ಕಿನ್ನರ ಲೂಕಕ್ಕೆ ಹೋದ ಅನುಭವ.  ಪ್ರತಿದಿನವೂ ಹೀಗೆ ಯಾಕಿರಾಬಾರದು ಅನ್ನಿಸುತ್ತಲೇ ಮತ್ತು ಮೂರು ದಿನಗಳು ಕಳೆದವು.  ಬೆಂಗಳೂರಿಗೆ ಮರಳುವ ಸಮಯವು ಬಂತು.

              ಇನ್ನೂ ಥೈಲಂಡಿನ ಗುಂಗಿನಲ್ಲಿರುವಾಗಲೇ ಕೆಲವು ವಿಷಯಗಳನ್ನು ಹಂಚಿಕೊಂಡರೆ ಮುಂದೆ ಹೋಗುವವರಿಗೆ ಅನುಕೂಲವಾಗಬಹುದು.

1. ಪ್ರವಾಸದ ಪ್ಲಾನು ನಿಗದಿಯಾದ ಕೂಡಲೇ ವಿಮಾನ  ಮತ್ತು ಹೋಟಲುಗಳ ಬುಕಿಂಗ್ ಮಾಡಿದರೆ ಒಳ್ಳೆಯ ರಿಯಾಯಿತಿ ಸಿಗುತ್ತದೆ.

2. "Forex Card" ಈಗ ಬ್ಯಾಂಕ್ಗಳಲ್ಲಿ ಸುಲಭವಾಗಿ ಸಿಗುತ್ತದೆ, ಸುಮಾರು 21 ದೇಶಗಳ ವಿವಿಧ ಕರೆನ್ಸಿಯನ್ನು ತುಂಬಬಹುದು.  ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಲೇ ಬೇಡಿ, ವಿಪರೀತ ಶುಲ್ಕ ಹಾಕುತ್ತಾರೆ. 

3.ಆದಷ್ಟು ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿ. ಸಮಯ ಮತ್ತು ಹಣ ಎರಡೂ ಉಳಿಯುತ್ತದೆ.  ಇದರ ಮಾಹಿತಿಯನ್ನು ಮುಂಗಡವಾಗಿ ತಿಳಿದುಕೊಳ್ಳಿ. 

4. Ready to Eat ನ ಕೆಲವು ಪ್ಯಾಕೆಟ್ಗಳು ಇದ್ದರೆ ಊಟದ ತೊಂದರೆ ಇರುವುದಿಲ್ಲ.  ಅಲ್ಲಿಯ ಊಟ ಹಿಡಿಸದಿದ್ದರೆ ಹಸಿವಿನಿಂದ ನಿಮ್ಮ ಪ್ರವಾಸಕ್ಕೆ ತೊಂದರೆಯಾಗಬಾರದು. 

 

       ಥೈಲ್ಯಾಂಡ್ ಒಂದು ಸುಂದರವಾದ ಸಮೃದ್ಧ ನಾಡು. ವಿಶ್ವದಾದ್ಯಂತ ಪರ್ಯಟಕರನ್ನು ತನ್ನೆಡೆಗೆ ಸೆಳೆಯುವುದರಲ್ಲಿ ಯಶಸ್ವಿಯಾಗಿದೆಯೆಂದರೆ ಅಲ್ಲಿಯ ಜನರ ಸರಳತೆ ಮತ್ತು ಸಜ್ಜನಿಕೆಯ ಪಾತ್ರ ಕೂಡಾ ತುಂಬಾ ಮಹತ್ವದ ಅಂಶವೆಂದರೆ ಅತಿಶಯೋಕ್ತಿಯಾಗಲಾರದು..

 

                                                                                        -   ಕ್ಯಾಪ್ಟನ್.  ಬಿ. ಎಸ್. ಸುದರ್ಶನ್

                                                                                            ಬೆಂಗಳೂರು
          

No comments:

Post a Comment